ಕ್ರಿಯಾತ್ಮಕ ಸಾಕ್ಷರತೆ

ವಯಸ್ಕರನ್ನು ಸಾಕ್ಷರರನ್ನಾಗಿ ಮಾಡುವಾಗ ನಿಯೋಜಿತ ಅವಧಿಯಲ್ಲಿ ಅವರಿಗೆ ವ್ಯಾವಹಾರಿಕ ಓದು ಬರೆಹವನ್ನು ಕಲಿಸುವುದರೊಂದಿಗೆ ಅವರ ಓದಿಗೂ ಜೀವನಕ್ಕೂ ಸಂಬಂಧವೇರ್ಪಡುವಂತೆ ಮಾಡಿ ಅವರ ಜೀವನವನ್ನು ಉತ್ತಮಗೊಳಿಸುವ ಯೋಜನೆಗೆ ಕ್ರಿಯಾತ್ಮಕ ಸಾಕ್ಷರತೆ (ಫಂಕ್ಷನಲ್ ಲಿಟರಸಿ) ಎನ್ನುತ್ತೇವೆ. ಇದು ಇತ್ತೀಚಿನ ಒಂದು ಯೋಜನೆ. ಎಳೆಯ ಮಕ್ಕಳ ಶಿಕ್ಷಣಕ್ಷೇತ್ರದಲ್ಲಿ ಬಳಕೆಯಲ್ಲಿದ್ದ ಈ ಕ್ರಮವನ್ನು ಈಗ ವಯಸ್ಕರ ಶಿಕ್ಷಣಕ್ಕೂ ಅನ್ವಯ ಮಾಡಲಾಗಿದೆ.

ವಿಶ್ವಸಂಸ್ಥೆ 1961ರ ಡಿಸೆಂಬರಿನಲ್ಲಿ ನಡೆಸಿದ ಮಹಾಸಭೆಯಲ್ಲಿ ವಿಶ್ವದ ನಿರಕ್ಷರತಾ ಸಮಸ್ಯೆಯ ನಿವಾರಣೆ ಬಗ್ಗೆ ಒಂದು ವರದಿಯನ್ನು ತಯಾರಿಸಲು ನಿರ್ಧರಿಸಿತು. ಜೊತೆಗೆ ಈ ವಿಷಯದಲ್ಲಿ ಪ್ರಪಂಚದ ನಾನಾಭಾಗಗಳಲ್ಲಿ ವಿಚಾರ ಸಂಕಿರಣಗಳನ್ನು ನಡೆಸಿತು. ವಯಸ್ಕರ ಶಿಕ್ಷಣ ತಜ್ಞರೊಡನೆ ಆಲೋಚಿಸಿತು. 1964ರಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ತಜ್ಞರ ಸಮಿತಿ ಕೆಲವು ಸಲಹೆಗಳನ್ನು ಮಾಡಿತು. ನಿರಕ್ಷರತಾ ನಿವಾರಣಾ ಕಾರ್ಯಕ್ರಮಗಳನ್ನು ವಿಶ್ವವ್ಯಾಪಿಯಾಗಿ ಕೈಗೊಂಡು ನಡೆಸುವಷ್ಟು ಹಣ ಮತ್ತು ಸಿಬ್ಬಂದಿ ಇಲ್ಲವಾಗಿ ಆಯ್ಕೆ ಮಾಡಿದ ಕ್ಷೇತ್ರಗಳಲ್ಲಿ ಮಾತ್ರ ಅಂಥ ಕಾರ್ಯವನ್ನು ಕೈಗೊಳ್ಳುವುದು ಒಳಿತು, ಅಂಥಲ್ಲಿ ಕೂಡ ಸಾಕ್ಷರತೆ ಜನತೆಯ ಆರ್ಥಿಕಾಭಿವೃದ್ಧಿಗೆ ನೆರವಾಗಬೇಕು-ಇವೇ ಆ ಸಮಿತಿ ಮಾಡಿದ ಮುಖ್ಯವಾದ ಎರಡು ಸಲಹೆಗಳು.

1965ರ ಸೆಪ್ಟೆಂಬರ್ 8 ರಿಂದ 18ರ ವರೆವಿಗೆ ಟೆಹರಾನಿನಲ್ಲಿ ನಡೆದ ವಿಶ್ವದ ವಿವಿಧ ದೇಶಗಳ ವಿದ್ಯಾಮಂತ್ರಿಗಳ ಸಮ್ಮೇಳನ ಈ ಬಗ್ಗೆ ಕೈಗೊಂಡ ನಿರ್ಣಯ ಗಮನಾರ್ಹವಾಗಿದೆ : ನಿರಕ್ಷರತಾ ನಿವಾರಣಾ ಕಾರ್ಯ ಅತಿ ಜರೂರಾಗಿ ಆಗಬೇಕಾದದ್ದು. ಈ ಕಾರ್ಯವನ್ನು ಪ್ರಾಯೋಗಿಕವಾಗಿ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಕೈಕೊಳ್ಳಬೇಕು. ಕಲಿಯಲು ಆಸಕ್ತಿ ಇರುವಂಥ ಕ್ಷೇತ್ರಗಳಲ್ಲಿ ಮಾತ್ರ ಇದನ್ನು ನಡೆಸಬೇಕು. ಸಾಕ್ಷರತೆ ವ್ಯಕ್ತಿಯ ಹಾಗೂ ದೇಶದ ಆರ್ಥಿಕ ಮತ್ತು ಸಾಮಾಜಿಕ ಹಿತಸಾಧನೆಯನ್ನು ಗುರಿಯಾಗಿಟ್ಟುಕೊಳ್ಳುವುದು ಒಳ್ಳೆಯದು. ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರಗಳಲ್ಲಿ ಮಾತ್ರ ಈ ಯೋಜನೆಯನ್ನು ಕಾರ್ಯಗತ ಮಾಡುವುದು ಒಳಿತು. ವಯಸ್ಕರ ಕಸಬಿನ ಬಗ್ಗೆ ಹೆಚ್ಚಿನ ತಿಳಿವಳಿಕೆ, ತಾಂತ್ರಿಕ ಜ್ಞಾನ ಮತ್ತು ತರಪೇತನ್ನು ಕೊಡುವುದೂ ಸಾಕ್ಷರತೆ ಯೋಜನೆಯ ಗುರಿಯಾಗಿರಬೇಕು. ಪ್ರತಿಯೊಂದು ದೇಶವೂ ತನ್ನ ಶಿಕ್ಷಣದ ಯೋಜನೆಯ ಚೌಕಟ್ಟಿನಲ್ಲೇ ನಿರಕ್ಷರತಾ ಯೋಜನೆಯನ್ನು ಅಳವಡಿಸಬೇಕು. ಯೋಜನೆಗೆ ಸರ್ಕಾರಿ ಮತ್ತು ಖಾಸಗಿ ಮೂಲಗಳು ನೆರವನ್ನು ನೀಡಬಹುದು. ಯೋಜನೆಯಲ್ಲಿ ಸಂಬಂಧಪಟ್ಟ ಎಲ್ಲ ಸರ್ಕಾರಿ ಇಲಾಖೆಗಳೂ ಸಹಕಾರ ನೀಡುವುದು ಒಳ್ಳೆಯದು. ಒಟ್ಟಿನಲ್ಲಿ ಮಾನವಶಕ್ತಿಯನ್ನು ಬಲಪಡಿಸಿ ದೇಶದ ಆರ್ಥಿಕ ಪ್ರಗತಿಯನ್ನು ಸಾಧಿಸುವುದು ಈ ಯೋಜನೆಯ ಗುರಿಯಾಗಿರಬೇಕು.

	 ಸಮ್ಮೇಳನದಲ್ಲಿ ಆದ ನಿರ್ಧಾರಗಳನ್ನು ಯುನೆಸ್ಕೊ 119 ಸದಸ್ಯ ರಾಷ್ಟ್ಟ್ರಗಳಿಗೆ ಕಳುಹಿಸಿತು. ಹಾಗೂ ಈ ಯೋಜನೆಯಲ್ಲಿ ಭಾಗವಹಿಸುವ ಬಗ್ಗೆ ಆಯಾ ರಾಷ್ಟ್ಟ್ರಗಳ ಅಭಿಪ್ರಾಯವನ್ನು ಕೇಳಿತು. 52 ದೇಶಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂದೆ ಬಂದವು ಆಲ್ಜೀರಿಯ, ಎಕ್ವಡಾರ್, ಇಥಿಯೋಪಿಯ, ಗಿನಿ, ಇರಾನ್, ಮಡಗಾಸ್ಕರ್, ಮಾಲಿ, ಸೂಡಾನ್, ವೆನಿಜ್ವೀಲ, ಭಾರತ ಮತ್ತು ಅರಬ್ಬೀ ಗಣರಾಜ್ಯಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಕ್ರಿಯಾತ್ಮಕ ಸಾಕ್ಷರತಾ ಕಾರ್ಯಕ್ರಮಗಳು ಪ್ರಾರಂಭವಾದುವು. ವೆನಿಜ್ವೀಲ ಮಾತ್ರ ಯೋಜನೆಯ ವೆಚ್ಚವನ್ನು ತಾನೇ ವಹಿಸಿಕೊಳ್ಳಲು ಒಪ್ಪಿತಾಗಿ ಉಳಿದ ದೇಶಗಳಿಗೆ ವಿಶ್ವಸಂಸ್ಥೆಯಿಂದ ಧನ ಸಹಾಯ ಒದಗುತ್ತಿದೆ. ಯುನೆಸ್ಕೋದ ತಾಂತ್ರಿಕ ನೆರವು ಎಲ್ಲ ರಾಷ್ಟ್ಟ್ರಗಳಿಗೂ ಉಂಟು.

	ಕೆಲವು ದೇಶಗಳಲ್ಲಿ ಕ್ರಿಯಾತ್ಮಕ ಸಾಕ್ಷರತೆಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಯೋಜನೆಯ ವೆಚ್ಚ 50 ದಶಲಕ್ಷ ಡಾಲರು. ಇದರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ನಿಧಿಯಿಂದ 10 ದಶಲಕ್ಷ ಡಾಲರು ನೆರವು ದೊರೆಯುವುದು. ಯೋಜನೆಯ ಅವಧಿ 4 ರಿಂದ 5 ವರ್ಷಗಳು. ಪ್ರಪಂಚ ಆಹಾರ ಸಂಸ್ಥೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ಪ್ರಪಂಚ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಮಂಡಳಿ-ಇವು ಈ ಯೋಜನೆಯಲ್ಲಿ ಪಾಲುಗೊಂಡಿವೆ.

	ಭಾರತವೂ ಈ ಯೋಜನೆಯಲ್ಲಿ ಸೇರಿದೆ. ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ ಆಹಾರದ ಉತ್ಪನ್ನಕ್ಕೆ ಆದ್ಯತೆ ನೀಡಲಾಗಿದೆ. ದೇಶದಲ್ಲಿ ಆಹಾರದ ಕೊರತೆಯನ್ನು ನೀಗಲು ಹೆಚ್ಚು ಇಳುವರಿ ಕೊಡುವ ತಳಿಗಳನ್ನು ಕಂಡುಹಿಡಿಯಲಾಗಿದೆ. ಹೆಚ್ಚು ಆಹಾರವನ್ನು ಬೆಳೆಯಲು ಸಾಕ್ಷರತೆಯನ್ನು ಸಾಧನವನ್ನಾಗಿ ಬಳಸುವುದು, ರೈತರಿಗೆ ಓದುಬರಹದ ಮೂಲಕ ಶಕ್ತಿಮಾನ್ ತಳಿಗಳನ್ನು ಬೆಳೆಯುವ ವಿಧಾನಗಳನ್ನು ತಿಳಿಸಿ ಹೆಚ್ಚು ಬೆಳೆಯಲು ಸಹಾಯ ಮಾಡುವುದು-ಈ ಯೋಜನೆಯ ಗುರಿ.

	ಅಖಿಲ ಭಾರತ ಮಟ್ಟದಲ್ಲಿ ಯೋಜನೆಯ ಜವಾಬ್ದಾರಿಯನ್ನು ಭಾರತ ಸರ್ಕಾರದ ವಿದ್ಯಾ ಇಲಾಖೆ, ವ್ಯವಸಾಯ, ರೇಡಿಯೋ ಮತ್ತು ಪ್ರಸಾರಖಾತೆಗಳು ಹೊತ್ತಿವೆ. ಯೋಜನೆಯ ಅವಧಿ 5 ವರ್ಷ. ವೆಚ್ಚ 2 ಕೋಟಿ ರೂಪಾಯಿ. ನಾಲ್ಕನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಹತ್ತುಲಕ್ಷ ರೈತರನ್ನು ಕ್ರಿಯಾತ್ಮಕವಾಗಿ ಸಾಕ್ಷರರನ್ನಾಗಿ ಮಾಡುವುದು ಈ ಯೋಜನೆಯ ಗುರಿ. ತರಗತಿಯ ವೆಚ್ಚ 895 ರೂ.ಗಳು. ಒಬ್ಬನನ್ನು ಅಕ್ಷರಸ್ಥನನ್ನಾಗಿ ಮಾಡಲು ಸರಾಸರಿ ತಲಾ 26 ರೂ. 50 ಪೈಸೆ ಖರ್ಚಾಗುವುದು.

	67-68ನೆಯ ಸಾಲಿನಲ್ಲಿ ಭಾರತದ ಮೂರು ಪ್ರಾಂತ್ಯಗಳಲ್ಲಿ ಯೋಜನೆ ಆರಂಭವಾಯಿತು. ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಜಿಲ್ಲೆಯನ್ನು ಆರಿಸಿಕೊಳ್ಳಲಾಯಿತು. ಈಗ ಮೈಸೂರು ರಾಜ್ಯದಲ್ಲಿ ಹಾಲಿ 5 ಜಿಲ್ಲೆಗಳಲ್ಲಿ ಈ ಯೋಜನೆ ನಡೆಯುತ್ತಿದೆ. ಮೊಟ್ಟಮೊದಲು ಆಯ್ಕೆಯಾದ ಜಿಲ್ಲೆ ರಾಯಚೂರು, ಭಾರತದಲ್ಲಿರುವ 320 ಜಿಲ್ಲೆಗಳಲ್ಲಿ 100 ಜಿಲ್ಲೆಗಳಿಗೆ 70-71ನೆಯ ಸಾಲಿಗೆ ಕಾರ್ಯಕ್ರಮವನ್ನು ವಿಸ್ತರಿಸಲಾಯಿತು. ಒಂದೊಂದು ಕ್ಷೇತ್ರದಲ್ಲೂ 60 ತರಗತಿಗಳನ್ನು ತೆರೆಯಲಾಗಿದೆ. ತರಗತಿಯ ಅವಧಿ 300 ಗಂಟೆಗಳು. ಒಂದೊಂದು ತರಗತಿಯಲ್ಲಿ 30-40 ರೈತ ವಿದ್ಯಾರ್ಥಿಗಳು ಇರುವರು. ಯೋಜನೆಯ ಪೂರ್ವ ವೆಚ್ಚವನ್ನು ಕೇಂದ್ರ ಸರ್ಕಾರವೇ ವಹಿಸಿಕೊಂಡಿದೆ.

	ಕೆಲವು ಕಡೆಗಳಲ್ಲಿ ಪ್ರಯೋಗಗಳು ಮುಗಿದು ವರದಿಗಳು ಬಂದಿವೆ. ಅವುಗಳಿಂದ ಕಂಡು ಬಂದ ಮುಖ್ಯಾಂಶಗಳು ಹೀಗಿವೆ :

	ಕ್ರಿಯಾತ್ಮಕ ಸಾಕ್ಷರತಾ ತರಗತಿಗಳಿಗೆ ಸೇರಿದ ವಿದ್ಯಾರ್ಥಿಗಳಲ್ಲಿ ತರಗತಿಗಳನ್ನು ಮಧ್ಯದಲ್ಲೇ ಬಿಡುವವರು ಕಡಿಮೆ. ಅತಿ ಹೆಚ್ಚೆಂದರೆ ಶೇಕಡ 5. ದಕ್ಷರಾದ ಉಪಾಧ್ಯಾಯರು ತರಗತಿಯನ್ನು ನಡೆಸಿದಲ್ಲಿ ತರಗತಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ತಡೆಗಟ್ಟುವುದು ಒಂದು ಸಮಸ್ಯೆ ಎಂಬುದಾಗಿ ಇರಾನಿನ ಪ್ರಯೋಗದಿಂದ ತಿಳಿದು ಬಂದಿದೆ.

	ರೈತರು ತಿಳಿವಳಿಕೆ ಹೆಚ್ಚಿಸಿಕೊಂಡು ಸುಧಾರಿತ ಬೇಸಾಯವನ್ನು ಕೈಕೊಂಡಿರುವರು. ಹಾಗೂ ಆರೋಗ್ಯದ ಕಡೆಗೆ ಗಮನ ಕೊಟ್ಟಿರುವರು. ಈ ಅಂಶ ಭಾರತ ಮತ್ತು ಕಾಸ್ಟರೀಕ ದೇಶಗಳಲ್ಲಿ ನಡೆದ ಪ್ರಯೋಗಗಳಿಂದ ಗೊತ್ತಾಗಿದೆ.

	ಕಾರ್ಮಿಕರಿಗೆ ಓದು ಬರೆಹ ಕಲಿಸುವುದರಿಂದ ಕಾರ್ಖಾನೆಗೆ ಲಾಭವೇ ಹೊರತು ನಷ್ಟವಿಲ್ಲ ಎಂಬ ಅಂಶ ಇರಾನ್ ಮತ್ತು ಬ್ರೆಜಿಲ್ ದೇಶಗಳಲ್ಲಿ ನಡೆದ ಪ್ರಯೋಗಗಳಿಂದ ಹೊರಬಿದ್ದಿದೆ.					  (ಟಿ.ಆರ್.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ